1233-1315. ಸ್ಪೇನಿನ ಕಾಟಲನ್ ನುಡಿಯ ಗದ್ಯಲೇಖಕ. ಮೊದಲು ಸ್ವೇಚ್ಛಾಚಾರಿಯಾಗಿದ್ದು ಅನಂತರ ಡಾಮಿನಿಕನ್ ಪಾದ್ರಿ, ತತ್ತ್ವಜ್ಞಾನಿ ಅತೀಂದ್ರಿಯ ಅನುಭಾವಿ, ಧರ್ಮಪ್ರಚಾರಕ, ಬೈರಾಗಿ-ಹೀಗೆ ಪರಿವರ್ತನೆ ಹೊಂದಿದ. ಈತನ ಮೊದಲ ಪುಸ್ತಕ ‘ಅಲ್‍ಮಾಗ್ನ’ ಕ್ರೈಸ್ತ ತತ್ತ್ವವನ್ನು ಬೌದ್ಧಿಕವಾಗಿ ವಿಮರ್ಶಿಸುವ, ಸ್ವತಂತ್ರ ವಿಚಾರ ಮಾರ್ಗದ ಸರಳ ಶೈಲಿಯ ಕೃತಿ. ಇದು ಮುಂದೆ ಲೀಬ್ನಿಜ್‍ನ ತಾರ್ಕಿಕ ಮಾರ್ಗಕ್ಕೆ ಅಂಕುರ ರೂಪವಾಯಿತೆನ್ನಬಹುದು. ಬ್ಲಾಂಕೇರ್ನ ಎಂಬುದು ತಾರ್ಕಿಕ ಉಪದೇಶದ ಮೂಲಕ ಲೋಕದ ನ್ಯೂನತೆಗಳನ್ನು ಸರಿಪಡಿಸುತ್ತಾ ಜನರನ್ನು ಧರ್ಮಮಾರ್ಗಕ್ಕೆ ಪರಿವರ್ತಿಸುತ್ತ ನಡೆದ ಧರ್ಮವೀರನೊಬ್ಬನ ರೊಮಾನ್ಸ್ ಕಥೆ. ನಿದರ್ಶನಗಳು, ಕಥೆಗಳು, ಸಂವಾದಗಳು ಲೇಖಕನ ಸುಧಾರಣಾಕಾಂಕ್ಷೆಯನ್ನೂ ವಿಚಾರಪರತೆಯನ್ನೂ ವ್ಯಕ್ತಪಡಿಸುತ್ತವೆ. ಈತನ ಪ್ರಿಯ-ಪ್ರೇಯಸಿಯರನ್ನು ಕುರಿತು ಗ್ರಂಥ ಎಂಬ ಚಿಕ್ಕ ಆನುಭಾವಿಕ ಗದ್ಯಪದ್ಯ ಪ್ರಥಮತ: ಅರಬ್ಬೀಭಾಷೆಯಲ್ಲಿ ರಚಿತವಾಗಿ ಕವಿಯಿಂದಲೇ ಕಾಟಲನ್ನಿಗೆ ಭಾಷಾಂತರಿಸಲ್ಪಟ್ಟಿತು. ಫ್ರಾನ್ಸಿಸ್ಕನ್ ಚಳವಳಿ ಪೌರ್ವಾತ್ಯ ಸೂಫಿó ತತ್ತ್ವಗಳನ್ನು ಕ್ರೈಸ್ತರಲ್ಲಿ ಹರಡುತ್ತಿತ್ತೆನ್ನಬಹುದು. ಕವಿ ಈ ವಿಷಯವನ್ನು ಸೂಫಿûಗಳ ರೀತಿಯಲ್ಲಿ ಬರೆದೆನೆಂದೇ ಹೇಳಿಕೊಂಡಿದ್ದಾನೆ. ದೈವ ಮತ್ತು ದೇವರ ಸಂಬಂಧವನ್ನು ಪ್ರಿಯ-ಪ್ರೇಯಸಿ ಸಂಬಂಧದಂತೆ ಕಲ್ಪಿಸುವ ಈ ಅನುಭಾವ ಸಾಹಿತ್ಯದ ರೀತಿಯನ್ನು ಜಯದೇವನ ಗೀತಗೋವಿಂದದಲ್ಲಿ ಕಾಣಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ